ಮುಕ್ತವ್ಯಾಪಾರ
	ಒಂದು ದೇಶ ಮತ್ತೊಂದು ದೇಶದೊಡನೆ ಹಾಗೆಯೇ ಎಲ್ಲ ದೇಶಗಳೂ ಪರಸ್ಪರ ನಡೆಸಬಹುದಾದ ಅನಿರ್ಬಂಧಿತ ಕೊಡುವ ಕೊಳ್ಳುವ ವ್ಯವಹಾರ (ಫ್ರೀಟ್ರೇಡ್).

	ಒಂದು ರಾಷ್ಟ್ರದೊಳಗೆ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸರಕು. ಸೇವೆಗಳ ವ್ಯಾಪಾರ ವ್ಯವಹಾರ ನಡುಸುವಂತೆಯೇ. ವಿವಿಧ ರಾಷ್ಟ್ರಗಳ ವ್ಯಕ್ತಿಗಳೂ ಸಂಸ್ಥೆಗಳೂ ಪರಸ್ಪರ ನಡೆಸುವ ವ್ಯಾಪಾರ ಆಧುನಿಕ ಪ್ರಪಂಚದ ಆರ್ಥಿಕ ಬೆಳೆವಣಿಗೆಯ ಒಂದು ಮುಖ್ಯ ವಿಷಯ. ಹಾಗೆ ಒಂದು ದೇಶದೊಳಗೆ ಅಲ್ಲಿಯ ಜನ ಪ್ರತಿ ಬಂಧಕಗಳಿಲ್ಲದೆ ನಿರಾಂತಂಕವಾಗಿ ವ್ಯಾಪಾರವ್ಯವಹಾರಗಳನ್ನು ನಿರ್ವಹಿಸುವಂತೆ. ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ನಿರ್ವಹಿಸಲು ಆಗುವುದಿಲ್ಲ. ಎಲ್ಲ ದೇಶಗಳೂ ವಿದೇಶಿ ವ್ಯಾಪಾರದ ಬಗ್ಗೆ ತಮ್ಮದೇ ಆದ ನಿಯಂತ್ರಣಗಳನ್ನೂ ಕೆಲವು ಪ್ರತಿಬಂಧಕಗಳನ್ನೂ ವಿಧಿಸಿವೆ. ಸ್ವದೇಶಿ ಉತ್ಪಾದಕರಿಗೆ ರಕ್ಷಣೆ ನೀಡುವ ಸಲುವಾಗಿ ಆಮದು ಸುಂಕ ವಿಧಿಸುವುದು. ಒಂದು ಸರಕಿನ ಆಮದನ್ನೇ ಪ್ರತಿಬಂಧಿಸುವುದು. ಆಮದಿಗೆ ನಿರ್ದಿಷ್ಟ ಪ್ರಮಾಣ ನಿಗದಿಮಾಡುವುದು. ರಫ್ತುಸುಂಕ ವಿಧಿಸುವುದು. ಒಂದು ಸರಕಿನ ರಫ್ತನು ನಿಷೇಧಿಸುವುದು ಅಥವಾ ಅದಕ್ಕೆ ನಿರ್ದಿಷ್ಟ ಪ್ರಮಾಣ ಗೊತ್ತು ಮಾಡಬಹುದೆಂಬುದನ್ನೂ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳು ಮೂಲಕ ನಿರ್ಧರಿಸುವುದು. ಸರ್ಕಾರಿ ವ್ಯಾಪಾರ. ಸರಕು ಒಪ್ಪಂದಗಳು ಇತ್ಯಾದಿ ಕ್ರಮಗಳನ್ನು ಕೈಗೊಳ್ಳದ ದೇಶದ ಜನ ಇತರ ರಾಷ್ಟ್ರಗಳಿಂದ ಆಮದು ಹಾಗೂ ರಫ್ತು ಮಾಡಲು ಇರುವ ನಿರಾತಂಕ ಪರಿಸ್ಥಿತಿಯನ್ನು ಮುಕ್ತ ವ್ಯಾಪಾರವೆನ್ನುವರು. ಮುಕ್ತವ್ಯಾಪಾರ ನೀತಿಯ ಪ್ರಕಾರ ಆಮದು ರಫ್ತು ಸುಂಕಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ. ವಿದೇಶಿ ವ್ಯಾಪಾರದ ಸುಂಕದರಗಳ ಮಟ್ಟ ಸರ್ಕಾರದ ಬೊಕ್ಕಸಕ್ಕೆ ಆದಾಯ ತುರುವ ದೃಷ್ಟಿಯಿಂದ ಮಾತ್ರ ನಿಗದಿಯಾಗಿರಬೇಕು. ಆಮದು ರಫ್ತುದಾರರಿಗೆ ಈ ಸುಂಕ ಅವರ ವ್ಯಾಪರಕ್ಕೆ ನಿರುತ್ತೇಜಕವಾಗಬಾರದು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಗಾತ್ರ ಇದರಿಂದ ಸಂಕುಚಿತವಾಗಬಾರದು.

	ಆಡಮ್ ಸ್ಮಿತ್ ಪ್ರತಿಪಾದಿಸಿರುವ ಆರ್ಥಿಕ ಸ್ವಾತಂತ್ರ್ಯ ತತ್ವವೇ ಮುಕ್ತ ವ್ಯಾಪಾರಕ್ಕೆ ತಳಹದಿ ಎನ್ನಬಹುದು. ಸರ್ಕಾರದ ಹಸ್ತಕ್ಷೇಪವಿಲ್ಲದೆ ಮುಕ್ತ ಪೈಪೊಟಿಯ ವಾತಾವರಣದಲ್ಲಿ ಜನರು ಸ್ವಹಿತಕ್ಕಾಗಿ ಆರ್ಥಿಕೋದ್ಯಮಗಳನ್ನು ನಿರ್ವಹಿಸುವುದರಿಂದುಂಟಾಗುವ ಅಗೋಚರ ಮಾರುಕಟ್ಟೆ ಪ್ರಭಾವ ಉತ್ಪನ್ನವನ್ನು ಪರಮಾವಧಿಗೊಳಿಸುವುವೆಂದೂ ಪ್ರತಿಯೊಂದು ರಾಷ್ಟ್ರವೂ ಇತರ ರಾಷ್ಟ್ರಗಳಿಗಿಂತ ನಿರಪೇಕ್ಷೆ ವೆಚ್ಚದಲ್ಲಿ ಉತ್ಪಾದಿಸಿ. ಇತರ ರಾಷ್ಟ್ರಗಳಿಗಿಂತ ತನಗಿಂತ ಸುಲಭ ನಿರಪೇಕ್ಷ ವೆಚ್ಚದಲ್ಲಿ ಉತ್ಪಾದಿಸಬಲ್ಲ ಸರಕುಗಳಿಗೆ ವಿನಿಮಯ ಮಾಡಿ ಕೊಳ್ಳುವುದರಿಂದ ಅಂತರಾಷ್ಟ್ರೀಯ ಶ್ರಮವಿಭಜನೆ ಹಾಗೂ ಪ್ರಾವೀಣ್ಯದ ಗರಿಷ್ಟ ಪ್ರಯೋಜನ ಫಲಿಸಿ ಎಲ್ಲ ರಾಷ್ಟ್ರಗಳಿಗೂ ಲಾಭವುಂಟಾಗುವುದೆಂಬುದೂ ಅಡಮ್ ಸ್ಮಿತ್ ವಾದವಾಗಿತ್ತು. ಈ ವಾದವನ್ನು ಡೇವಿಡ್ ರಿಕಾರ್ಡೊ ಮತ್ತು ಜೆ. ಎಸ್. ಮಿಲ್ ಪುಷ್ಟಿಗೊಳಿಸಿದರು. ಸರಕುಗಳ ಉತ್ಪಾದನೆಯಲ್ಲಿ ವಿವಿಧ ರಾಷ್ಟ್ರಗಳು ಹೊಂದಿರುವ ಸಾಪೇಕ್ಷ ವೆಚ್ಚ ವ್ಯತ್ಯಾಸಗಳೇ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುವು ಎಂಬುದನ್ನು ರಿಕಾರ್ಡೊವಿನ ಸಾಪೇಕ್ಷ ವೆಚ್ಚ ವ್ಯತ್ಯಾಸಗಳ ಸಿದ್ಧಾಂತ ಸಮರ್ಥಿಸುವುದು. ಈ ಸಿದ್ಧಾಂತದ ಆಧಾರದ ಮೇಲೆ ಬೆಳೆಯುವ ಅಂತರರಾಷ್ಟ್ರೀಯ ವ್ಯಾಪಾರ ಎಲ್ಲ ರಾಷ್ಟ್ರಗಳಿಗೂ ಲಾಭದಾಯಕ ಬೆಳೆಯುವ ಅಂತರರಾಷ್ಟ್ರೀಯ ವ್ಯಾಪಾರ ಎಲ್ಲ ರಾಷ್ಟ್ರಗಳಿಗೂ ಲಾಭಾದಾಯಕವೆಂಬುದು ರಿಕಾರ್ಡೊ ಅಭಿಪ್ರಾಯ. ಈ ಬಗೆಯ ವಿದೇಶಿ ವ್ಯಾಪಾರ ಬೆಳೆವಣಿಗೆಗೆ ಮುಕ್ತವ್ಯಾಪಾರ ನೀತಿಯ ಅನುಸರಣೆ ಅವಶ್ಯಕ.

	ಮುಕ್ತವ್ಯಾಪಾರದಿಂದ ಹಲವಾರು ಪ್ರಯೋಜನಗಳು ಲಭಿಸುವುವು. ವಿವಿಧ ರಾಷ್ಟ್ರಗಳ ಉತ್ಪಾದನಾ ಸಾಧನಸಂಪತ್ತುಗಳು ಭಿನ್ನವಾಗಿರುವುದರಿಂದ ಪ್ರತಿಯೊಂದು ರಾಷ್ಟ್ರವೂ ಸಾಪೇಕ್ಷ ವೆಚ್ಚ ಸೌಲಭ್ಯವಿರುವ ಸರಕುಗಳು ಉತ್ಪಾದನೆಯಲ್ಲಿ ಪ್ರಾವೀಣ್ಯ ಪಡೆದು ಆ ಸರಕುಗಳನ್ನು ರಫ್ತು ಮಾಡುವುದು. ಉತ್ಪಾದನೆಯಲ್ಲಿ ಹೀಗೆ ಉಂಟಾಗುವ ಪ್ರಾವೀಣ್ಯ ಮತ್ತು ಅಂತರರಾಷ್ಟ್ರೀಯ ಶ್ರಮವಿಭಜನೆಯಿಂದ ಸರಕುಗಳ ಮಾರುಕಟ್ಟೆ ವಿಸ್ತರಿಸುವುದು. ಇದರಿಂದ ಬೃಹತ್‍ಪ್ರಮಾಣದಲ್ಲಿ ಎಲ್ಲ ಸರಕುಗಳ ಉತ್ಪಾದನೆಗೆ ಅವಕಾಶವಾಗುವುದು. ಇದು ಸಾರ್ವತ್ರಿಕವಾಗಿ ಲಾಭದಾಯಕವಾಗುವುದು ಮುಕ್ತವ್ಯಾಪಾರ ಖಾಸಗಿ ಉದ್ಯಮಿಗಳಲ್ಲಿ ಹಿತಕರವಾದ ಪೈಪೋಟೆ ಉಂಟು ಮಾಡುವುದರಿಂದ ಉತ್ಪನ್ನ ಕಾರ್ಯನಿರ್ವಹಣೆಯಲ್ಲಿ ದಕ್ಷತೆ ಹೆಚ್ಚುವುದು. ಉತ್ಪಾದಾನಾ ವೆಚ್ಚ ಇಳಿಯುವುದು. ಉತ್ಪಾದಕರಿಗೆ ಲಾಭ ಕಡಿಮೆಯಾಗದಂತೆ, ಬಳಕೆದಾರದಿಗೆ ಸರಕುಗಳು ಕಡಿಮೆ ಬೆಲೆಗೆ ಲಭಿಸುವುವು. ಮುಕ್ತವ್ಯಾಪಾರದಲ್ಲಿ ತಮಗೆ ಬೇಕಾದ ರಾಷ್ಟ್ರದಿಂದ ಸರಕುಗಳನ್ನು ಕೊಳ್ಳಬಹುದು. ಮುಕ್ತವ್ಯಾಪಾರದಿಂದ ವಿವಿಧ ಸರಕುಗಳ ಅಂತರರಾಷ್ಟ್ರೀಯ ಬೆಲೆಗಳ ರಚನೆಯಲ್ಲಿ ಸುಸಂಬಂಧವೇರ್ಪಡುವ ಪ್ರವೃತ್ತಿ ಇರುವುದು. ಇದರಿಂದ ವಿದೇಶಿ ವಿನಿಮಯ ದರ ಸ್ಥಿರತೆಯನ್ನು ಕಾಪಾಡುವುದು ಸುಲಭವಾಗುವುದು. ಹಾಗೂ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಮುಕ್ತವ್ಯಾಪಾರ ನೀತಿಯನ್ನು ಹತ್ತೊಂಬತ್ತನೆಯ ಶತಮಾನದ ಸುಮಾರು ಎಪ್ಪತ್ತರ ದಶಕದ ತನಕ ಅನುಸರಿಸಲಾಯಿತು. ತರುವಾಯ ಜರ್ಮನಿ, ಫ್ರಾನ್ಸ್, ಇಟಲಿ, ಅಮೆರಿಕ ಇತ್ಯಾದಿ ರಾಷ್ಟ್ರಗಳೆಲ್ಲ ಅಧುನಿಕ 'ಕೈಗಾರಿಕಾ ಕ್ರಾಂತಿ' ಸಾಧಿಸಲು ಆರಂಭಿಸಿದಾಗ ಆ ಕ್ರಾಂತಿಯ ಮುಂಚೂಣಿ ರಾಷ್ಟ್ರದ ಇಂಗ್ಲೆಂಡಿನ ಅಸಮಾನ ಪೈಪೋಟಿ ತಪ್ಪಿಸಿಕೊಳ್ಳಲು ಮುಕ್ತವ್ಯಾಪಾರ ನೀತಿಯನ್ನು ತ್ಯಜಿಸಿ ರಕ್ಷಣಾ ನೀತಿಯನ್ನು ಅನುಸರಿಸಿದುವು. ಬ್ರಿಟಿಷ್ ಸರ್ಕಾರ ತನ್ನ ಅಧೀನ ರಾಷ್ಟ್ರವಾಗಿದ್ದ ಭಾರತದ ಮೇಲೆ ಮುಕ್ತ ವ್ಯಾಪಾರ ನೀತಿಯನ್ನು ಹೇರಿದುದರ ಪರಿಣಾಮವಾಗಿ ಆಗ ಇದ್ದ ಭಾರತದ ತನ್ನ ಸಣ್ಣ ಕೈಗಾರಿಕೆಗಳೂ ಗೃಹ ಕೈಗಾರಿಕೆಗಳೂ ಅವನತಿ ಹೊಂದಿರುವಲ್ಲದೆ ಭಾರತ ತನ್ನಸಣ್ಣ ಕೈಗಾರಿಕೆಗಳನ್ನು ಬೆಳೆಸಿಕೊಳ್ಳಲಾಗಲಿಲ್ಲ ಎಂಬ ವಿಷಯ ಸರ್ವವಿದಿತವಾಗಿತ್ತು. ದೇಶೀಯ ಉದ್ಯಮಿಗಳನ್ನು ವಿದೇಶಿ ಪೈಪೊಟಿಯಿಂದ ರಕ್ಷಿದದಿದ್ದರೆ ತಮ್ಮ ದೇಶ ಆಧುನಿಕ ಅಥಿಕ ಕ್ರಾಂತಿಯನ್ನು ಸಾಧಿಸಲಾರವು ಎಂಬುದನ್ನು ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ಗ್ರಹಿಸಿ ರಕ್ಷಣಾನೀತಿಯನ್ನು ಅನುಸರಿದುವು. ಎರಡನೆಯ ಮಹಾಯುದ್ಧಾ ನಂತರ ಅರ್ಥಿಕಾಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಂಡ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ವಿದೇಶಿ ವ್ಯಾಪಾರದಲ್ಲಿ ಮುಕ್ತವ್ಯಾಪಾರ ನೀತಿಯನ್ನು ಬದಿಗಿಟ್ಟು ರಕ್ಷಣಾ ನೀತಿಯನ್ನು ಅನುಸರಿಸಿದವು.

	ಮುಕ್ತವ್ಯಾಪಾರ ಆರ್ಥಿಕಕ್ರಿಯೆಯ ಕ್ರಿಯಾಪರಿಪೂರ್ಣತೆಯನ್ನೂ ಪೂರ್ಣೋದ್ಯೋಗ ಪರಿಸ್ಥಿತಿಯನ್ನೂ ಉತ್ಪಾದನೆ ಹಾಗೂ ವರಮಾನಗಳನ್ನು ಪರಮಾವಧಿ ಗೋಳಿಸುವುದಲ್ಲದೆ ಸಾರ್ವತ್ರಿಕ ಆರ್ಥಿಕ ಕ್ಷೇಮವನ್ನು ಇದರಿಂದ ಅಳೆಯಬಹುದೆಂದೂ ಕೆಲವರು ವಾದಿಸುತ್ತಾರೆ. ಆದರೆ ಕೆಲವು ಅರ್ಥಶಾಸ್ತ್ರಜ್ಞರು ಮುಕ್ತವ್ಯಾಪಾರದಲ್ಲಿ ಬೆಲೆಗಳ ಏರಿಳಿತದಲ್ಲಿಯೂ ಬೇಡಿಕೆ ಮತ್ತು ಪೂರೈಕೆಗಳ ಬದಲಾವಣೆಗಳಲ್ಲಿಯೂ ಪರಸ್ಪರವಾಗಿ ಸಂಪೂರ್ಣ ಸಾಮರಸ್ಯವಿರುವುದಿಲ್ಲ ಮತ್ತು ಇವುಗಳಿಗೆ ಅನುಗುಣವಾಗಿಯೇ ಆಮದು ರಫ್ತುವ್ಯಾಪರಗಳಲ್ಲಿ ವ್ಯತ್ಯಾಸಗಳಾಗುವುದಿಲ್ಲ; ಕೆಲವು ಬೆಲೆಗಳಲ್ಲಿಯೂ ಕೆಲವು ಸರಕುಗಳು ಆಮದು ರಫ್ತುಪ್ರಮಾಣಗಳಲ್ಲಿಯೂ ಒಂದು ರೀತಿಯ ಜಿಗುಟುಗಳು ಅಥವಾ ಮಣಿಯದಿರುವಿಕೆ ಅನಿವಾರ್ಯವಾಗಿ ಇರುವುವು. ಇಂಥ ಪರಿಸ್ಥಿತಿಯಲ್ಲಿ ಮುಕ್ತವ್ಯಾಪಾರ ಉತ್ತಮವಾದ ವಿದೇಶಿವ್ಯಾಪಾರ ನೀತಿಯಾಗಲಾರದೆಂದು ಅಭಿಪ್ರಾಯಪಡುತ್ತಾರೆ.

	ಮುಕ್ತವ್ಯಾಪಾರ ಉತ್ಪಾದನೆ ಹಾಗೂ ವರಮಾನಗಳನ್ನು ಪರಮಾವಧಿಗೊಳಿಸುವುದರಿಂದ ಜನರ ಆರ್ಥಿಕ ಕ್ಷೇಮವನ್ನೂ ಹೆಚ್ಚಿಸುವುದೆಂಬ ವಾದ ಅಕ್ಷೇಪಣೆಗೆ ಒಳಗಾಗಿದೆ. ಏಕೆಂದರೆ ಜನರ ಆರ್ಥಿಕ ಕ್ಷೇಮ ಕೇವಲ ಉತ್ಪನ್ನ ವರಮಾನಗಳ ಗರಿಷ್ಠಮಟ್ಟವನ್ನು ಅವಲಂಬಿಸಿರುವುದಿಲ್ಲ; ವರಮಾನ ವ್ಯಕ್ತಿಗಳಲ್ಲಿ ಮತ್ತು ಉತ್ಪಾದನಾಂಗಗಳಲ್ಲಿ ಯಾವರೀತಿ ವಿತರಣೆಯಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ವಿಶ್ವಸಂಸ್ಥೆ 1946ರಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ ಬಗ್ಗೆ ಹವನ್ನಾ ಪ್ರಣಾಳಿಕೆಯನ್ನು ಸಿದ್ಧಪಡಿಸಿತು (1948). ಆದರೆ ಈ ಸಂಸ್ಥೆಯ ಸ್ಥಾಪನೆಗೆ ಕೆಲವು ತೊಡಕುಗಳುಂಟಾದ್ದರಿಂದ ಇವರಲ್ಲಿ ಅಡಕವಾಗಿದ್ದ ಮುಕ್ತವ್ಯಾಪಾರ ಧ್ಯೇಯವನ್ನು ಕಾರ್ಯಗತಮಾಡುವ ಉದ್ದೇಶದಿಂದ 1947 ಅಕ್ಟೋಬರ್ 30ರಂದು ಅನೇಕ ರಾಷ್ಟ್ರಗಳು ಕೂಡಿಕೊಂಡು ಸುಂಕ ಹಾಗೂ ವ್ಯಾಪಾರದ ಸಾರ್ವತ್ರಿಕ ಒಪ್ಪಂದ ಎಂಬ ಸಂಸ್ಥೆಯನ್ನು ಸ್ಥಾಪಿಸಿದುವು. ವಿದೇಶಿ ವ್ಯಾಪಾರ ಸುಂಕಗಳ ಇಳಿತಾಯ ಮತ್ತು ವ್ಯಾಪಾರ ಪ್ರತಿಬಂಧಕಗಳ ನಿರ್ಮೂಲನ ಇವುಗಳ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ ವಿಸ್ತರಿಸುವುದು ಇವೇ ಈ ಸಂಸ್ಥೆಯ ಮುಖ್ಯೋದ್ದೇಶಗಳಾಗಿವೆ. ಸ್ಥಾಪನೆಯಾದಾಗಿನಿಂದಲೂ ಈ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಆಗಾಗ ಸಭೆ ಸೇರಿ ಈ ಉದ್ದೇಶ ಸಾಧನೆಗಾಗಿ ಯುಕ್ತ ಕ್ರಮಗಳನ್ನು ಕೈಗೊಂಡಿವೆ.

	ಮುಕ್ತವ್ಯಾಪಾರ ನೀತಿಯ ಅನುಸರಣೆಗೆ ಕೆಲವು ಅಡೆತಡೆಗಳಿವೆ. ಏಕೆಂದರೆ ಇಂದು ಎಲ್ಲ ರಾಷ್ಟ್ರಗಳೂ ಒಂದಲ್ಲ ಒಂದು ಆರ್ಥಿಕ ಯೋಜನೆಯನ್ನು ಅನುಸರಿಸುತ್ತಿವೆ. ಈ ಕಾರಣಗಳಿಂದ 18-19ನೆಯ ಶತಮಾನದಲ್ಲಿದ್ದಂಥ ಮುಕ್ತವ್ಯಾಪಾರ ಪರಿಸ್ಥಿತಿ ಮತ್ತೆ ಬರಲಾರದು. ಆದರೂ ಯೋಜನೆಯ ನಿಯಂತ್ರಿಕ ಆರ್ಥಿಕತೆಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಕ್ರಮಗೊಳಿಸುವುದರಲ್ಲಿ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಒಪ್ಪಂದಗಳಿಗೆ ಮುಖ್ಯಸ್ಥಾನವಿದೆ. ಈ ಒಪ್ಪಂದಗಳ ಮೂಲಕ ರಾಷ್ಟ್ರಗಳು ವಿದೇಶಿ ವ್ಯಾಪಾರ ಪ್ರತಿಬಂಧಕಗಳನ್ನು ತ್ಯಜಿಸಿ ಮುಕ್ತವ್ಯಾಪಾರ ನೀತಿಯನ್ನು ಅನುಸರಿಸಬಹುದು. 1950ರಿಂದೀಚೆಗೆ ನೆರೆಹೊರೆಯ ರಾಷ್ಟ್ರಗಳು ಸೇರಿ ಅನೇಕ ವಿಧಧ ಆರ್ಥಿಕ ಸಂಘಗಳನ್ನು ಸ್ಥಾಪಿಸಿಕೊಂಡಿವೆ. ಒಂದೊಂದು ಸಂಘವೂ ತನ್ನ ಸದಸ್ಯ ರಾಷ್ಟ್ರಗಳೊಳಗೆ ಮುಕ್ತ ವ್ಯಾಪಾರವನ್ನು ಅನುಸರಿಸುವ ಧ್ಯೇಯ ಹೊಂದಿವೆ. ಹಾಗೆಯೇ ಈ ರಾಷ್ಟ್ರಗಳ ಮತ್ತು ಸಂಘೇತರ ರಾಷ್ಟ್ರಗಳೊಡನ ಮುಕ್ತ ವ್ಯಾಪಾರ ಬೆಳೆಸುವ ಪ್ರಯತ್ನ ಮಾಡಬೇಕಾಗಿವೆ.
(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ